Header Ads Widget

Whats-App-Image-2024-05-08-at-4-44-56-PM-4

ಕೋಟ: ಕದ್ದ ಚಿನ್ನಾಭರಣಗಳ ಸಾಗಾಟ : ಓರ್ವ ‌ವಶಕ್ಕೆ...!!

ಕೋಟ: ಕೇರಳದಲ್ಲಿ ಕದ್ದ ಚಿನ್ನಾಭರಣಗಳನ್ನು ಉಡುಪಿ-ಕಾರವಾರ ಮಾರ್ಗವಾಗಿ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯಿಂದ 1.2 ಕೆ.ಜಿ. ಚಿನ್ನ ವಶಕ್ಕೆ ಪಡೆದ ಘಟನೆ ಕೋಟ ಮೂರ್ಕೈ ಸಮೀಪ ನಡೆದಿದೆ.

ಬಂಧಿತ ಆರೋಪಿ ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮೊಹಮ್ಮದ್‌ ಇರ್ಫಾನ್‌ (35) ಎಂದು ಗುರುತಿಸಲಾಗಿದೆ.

ಕೇರಳದ ಹೆಸರಾಂತ ಮಲಯಾಳ ಚಿತ್ರ ನಿರ್ಮಾಪಕ ಜೋಶಿ ಅವರ ಕೊಚ್ಚಿ ಪನಂಪಲ್ಲಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶನಿವಾರ ಮುಂಜಾನೆ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿದ ಮೊಹಮ್ಮದ್‌ ಇರ್ಫಾನ್‌ ಕಪಾಟನ್ನು ಒಡೆದು 10 ವಜ್ರದ ಉಂಗುರ, 12 ವಜ್ರದ ಕಿವಿಯೋಲೆ, 2 ಚಿನ್ನದ ಉಂಗುರ, 10 ಚಿನ್ನದ ನೆಕ್ಲೆಸ್‌, 10 ಚಿನ್ನದ ಬಳೆ, 10 ಕೈಗಡಿಯಾರ ಸಹಿತ 1 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕಳವುಗೈದು ಪರಾರಿಯಾಗಿದ್ದ ಎನ್ನಲಾಗಿದೆ.

ಕದ್ದ ಚಿನ್ನವನ್ನು ಆರೋಪಿಯು ಬಿಹಾರಕ್ಕೆ ಸಾಗಿಸುವ ಯತ್ನದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಕೋಟ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಉನ್ನತ ಪೊಲೀಸ್‌ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸಿದ್ದು, ಕೇರಳ ಪೊಲೀಸರು ಜಿಲ್ಲೆಗೆ ಆಗಮಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಮನೆಯವರು ಮಾಹಿತಿ ನೀಡುವ ಮೊದಲೇ ಪತ್ತೆ!
ಮನೆಯಲ್ಲಿ ಯಾರೂ ಇರದ ಕಾರಣ ಕಳವಾಗಿರುವ ಕುರಿತು ಅವರಿಗೆ ಮಾಹಿತಿ ಇರಲಿಲ್ಲ, ಹಾಗಾಗಿ ಪೊಲೀಸರಿಗೂ ದೂರು ಬಂದಿರಲಿಲ್ಲ. ಆದರೆ ಶಂಕಿತ ವಾಹನವೊಂದು ರಾಜ್ಯದಲ್ಲಿ ಸಂಚರಿಸಿದ್ದಲ್ಲದೆ ಕರ್ನಾಟಕದತ್ತ ಸಾಗಿದೆ ಎಂಬ ಮಾಹಿತಿ ಅರಿತ ಕೇರಳ ಪೊಲೀಸರು ಆಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕೋಟ ಠಾಣೆಯ ಎಸ್‌ಐ ತೇಜಸ್ವಿ, ಅಪರಾಧ ವಿಭಾಗದ ಎಸ್‌ಐ ಸುಧಾ ಪ್ರಭು ಮತ್ತು ಸಿಬಂದಿಗಳಾದ ಗೋಪಾಲ ಪೂಜಾರಿ, ಪ್ರಸನ್ನ, ವಿಜಯೇಂದ್ರ ಮೊದಲಾದವರು ಸಾಸ್ತಾನ ಟೋಲ್‌ ಕೇಂದ್ರದಲ್ಲಿ ಶಂಕಿತ ಕಾರನ್ನು ತಡೆಯಲು ಯತ್ನಿಸಿದರು. ಆದರೆ ಚಾಲಕನು ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದನು. ಹಿಂಬಾಲಿಸಿದ ಪೊಲೀಸರು ಕೋಟ ಮೂರ್ಕೈ ಯಲ್ಲಿ ತಮ್ಮ ವಾಹನವನ್ನು ಅಡ್ಡ ನಿಲ್ಲಿಸಿ ಕಾರನ್ನು ತಡೆದರು. ಕಾರನ್ನು ಪರಿಶೀಲಿಸಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಯಿತು. ವಿಚಾರಿಸಿದಾಗ ಆರೋಪಿಯು ಕೇರಳದಲ್ಲಿ ಕಳವು ಕೃತ್ಯ ಎಸಗಿ ಬಿಹಾರಕ್ಕೆ ಪರಾರಿಯಾಗುತ್ತಿರುವುದಾಗಿ ತಿಳಿಸಿದನು.

ಆತನ ಮೇಲೆ ಬಿಹಾರದಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Post a Comment

0 Comments