Header Ads Widget

ಬೆಂಗಳೂರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಶೆಡ್ ನಲ್ಲಿ ಮಲಗಿದ್ದ ನಾಲ್ಕು ವರ್ಷದ ಮಗು ಸಜೀವ ದಹನ..!!

ಬೆಂಗಳೂರು : ಆರ್‌.ಟಿ.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ವೊಂದರ ಕೊಠಡಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ವರ್ಷದ ಗಂಡು ಮಗು ಸಜೀವ ದಹನ ವಾಗಿರುವ ದುರ್ಘಟನೆ ನಡೆದಿದೆ.

ನೇಪಾಳದ ಮೂಲದ ಪೂರನ್‌ ಖಂಡಕ್‌ ಮತ್ತು ಲಕ್ಷ್ಮಿ ದಂಪತಿ ಪುತ್ರ ಅನೂಪ್‌ (4) ನೊಂದಿಗೆ ಕಳೆದ ಮೂರೂವರೆ ವರ್ಷಗಳಿಂದ ಆರ್‌.ಟಿ.ನಗರದ ಸುಲ್ತಾನ್‌ಪಾಳ್ಯದ ರಿಯಾನ್‌ ವುಡ್‌ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯ ಕೊಠಡಿಯಲ್ಲಿ ವಾಸವಿದ್ದು ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ.

ರಿಯಾನ್‌ ವುಡ್‌ ಅಪಾರ್ಟ್‌ಮೆಂಟ್‌ನಲ್ಲಿ ಪೂರನ್‌ ಖಂಡಕ್‌ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡಿದರೆ, ಪತ್ನಿ ಲಕ್ಷ್ಮಿ ಮನೆಗೆಲಸ ಮಾಡುತ್ತಿದ್ದರು. ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಈ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕನೇ ಮಹಡಿಯ ಮೇಲೆ ಶೀಟ್‌ ಹಾಕಿ ಒಂದು ಕೊಠಡಿ ನಿರ್ಮಿಸಿ ಪೂರನ್‌ ದಂಪತಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಪೂರನ್‌ ಅಪಾರ್ಟ್‌ಮೆಂಟ್‌ ಎದುರು ಸೆಕ್ಯೂರಿ ಗಾರ್ಡ್‌ ಕೆಲಸ ಮಾಡುತ್ತಿದ್ದು ಪತ್ನಿ ಲಕ್ಷ್ಮಿ ಮಗುವನ್ನು ಆ ಕೊಠಡಿಯಲ್ಲಿ ಮಲಗಿಸಿ, ಬಾಗಿಲು ಹಾಕಿಕೊಂಡು ಮನೆಗೆಲಸಕ್ಕೆ ತೆರಳಿದ್ದರು. ಸಂಜೆ 5.30ರ ಸುಮಾರಿಗೆ ಕೊಠಡಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು ಇದನ್ನು ಗಮನಿಸಿದ ಪೂರನ್‌ ಓಡಿಹೋಗಿ ನೋಡಿದಾಗ ಕೊಠಡಿ ಒಳಗೆ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ.

ತಕ್ಷಣ ಬಾಗಿಲು ತೆರೆದು ನೋಡಿದಾಗ ಮಗು ಬೆಂಕಿಯಿಂದ ಸುಟ್ಟು ಸಾವನ್ನಪ್ಪಿತ್ತು.ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಆರ್‌.ಟಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Post a Comment

0 Comments