Header Ads Widget

Whats-App-Image-2024-05-08-at-4-44-56-PM-4

ಉಡುಪಿ-ಚಿಕ್ಕಮಗಳೂರು : ಯಾರು ಗೆದ್ದರೂ ಅಚ್ಚರಿ ಇಲ್ಲ : 2023ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹಿನ್ನೆಲೆಯಲ್ಲಿ ಕಾಂಗ್ರೆಸಲ್ಲಿ ಹುರುಪು ಹೆಚ್ಚಿದ್ದರೇ, ಬಿಜೆಪಿಯಲ್ಲಿ ಆತಂಕ ಹೆಚ್ಚಿಸಿದೆ...!!

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯಾರೂ ಗೆದ್ದರೂ ಅಲ್ಪ ಮತಗಳ ಅಂತರದಿಂದ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಇದು ಬಿಜೆಪಿಗೆ ತೀವ್ರ ಆತಂಕಕ್ಕೆ ಕಾರಣವಾಗಿದ್ದರೇ, ಕಾಂಗ್ರೆಸ್ ಪಕ್ಷಕ್ಕೆ ಆಶಾಕಿರಣವನ್ನು ತೋರಿಸಿದೆ.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದ ಬಿಜೆಪಿಯ ಸ್ಥಿತಿ ಈ ಬಾರಿ ಹಾಗಿಲ್ಲ. ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಉಡುಪಿಯ 4  ವಿಧಾನ ಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದರೂ, ಚಿಕ್ಕಮಗಳೂರಿನ ನಾಲ್ಕೂ ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಸಂಗ್ರಹಿಸಿದೆ. ಇದು ಕಾಂಗ್ರೆಸ್ ನ ಭರವಸೆಗೆ ಕಾರಣವಾಗಿದ್ದರೇ ಬಿಜೆಪಿಗೆ ಒಳಗೊಳಗೆ ಹೆದರಿಕೆ ಹುಟ್ಟಿಸಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು 71,89,16 (ಶೇ 62.46) ಮತಗಳನ್ನು ಗಳಿಸಿ ವಿಜಯಿ ಆಗಿದ್ದರು. ಆಗ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 3,69,317 (ಶೇ 32.09) ಮತಗಳನ್ನು ಗಳಿಸಿ ಸೋತಿದ್ದರು. ಬಿಜೆಪಿ ಭರ್ಜರಿಯಾಗಿ 3,49,599 (ಶೇ 30.37) ಮತಗಳ ಅಂತರದಿಂದ ಗೆದ್ದಿತ್ತು.

2023ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಒಟ್ಟು ಶೇ 55.25 ಓಟ್ ಶೇರ್ ಪಡೆದಿದೆ. ಕಾಂಗ್ರೆಸ್ ನ ಓಟ್ ಶೇರ್ ಶೇ 41.50 ಆಗಿದೆ.ಚಿಕ್ಕಮಗಳೂರು ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ಅದರ ಸರಾಸರಿ ಓಟ್ ಶೇರ್ ಶೇ 42.75 ಆಗಿದ್ದರೇ, ಬಿಜೆಪಿಯ ಓಟ್ ಶೇರ್ ಶೇ 39.75ಕ್ಕೆ ಕುಸಿದಿದೆ. 

ಒಟ್ಟಾರೇ ಈ ಎಲ್ಲಾ 8 ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಸರಾಸರಿ ಶೇ 47.50 ಮತಪಾಲು ಪಡೆದಿದ್ದರೇ, ಕಾಂಗ್ರೆಸ್ ಸರಾಸರಿ ಶೇ 42.12 ಮತಪಾಲು ಪಡೆದಿದೆ. ಸೋಲಿನ ಅಂತರ ಕೇವಲ ಶೇ 5.38 ಆಗಿದೆ.  2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಅಂತರ ಶೇ 30.37 ಇದ್ದುದು, 2023ರ ವಿಧಾನಸಭಾ ಚುನಾವಣೆಯಲ್ಲಿ ಅದು ಶೇ 5.38ಕ್ಕೆ ಇಳಿದಿರುವುದು ಗಮನಾರ್ಹವಾಗಿದೆ.

ಹೆಗ್ಡೆ ಅವರ ವರ್ಚಸ್ಸು ಕೈಹಿಡಿದೀತೇ ?
ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಈ ಹಿಂದೆ ಇದೇ ಕ್ಷೇತ್ರದಲ್ಲಿ ಒಮ್ಮೆ ಗೆದ್ದು ಸಂಸದರಾಗಿದ್ದವರು, ಅವರಿಗೆ ತಮ್ಮದೇ ಒಂದು ವರ್ಚಸ್ಸಿದೆ. ಸಜ್ಜನ, ಸದನ ಶೂರ ಎಂಬ ಹೊಗಳಿಕೆ ಇದೆ. ತಮ್ಮ ಕೆಲಸಗಳು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತಿದ್ದಾರೆ. ಕ್ಷೇತ್ರದ ಬಗ್ಗೆ ತಮ್ಮ ಕನಸುಗಳನ್ನು ಮತದಾರರ ಮುಂದೆ ಬಿಟ್ಟಿಟ್ಟಿದ್ದಾರೆ. ಅವರು ಹೋದಲ್ಲೆಲ್ಲಾ ಸೇರುತ್ತಿರುವ  ಜನರ ಅಭಿಮಾನ ಮತಗಳಾಗುತ್ತವೆಯೇ ಎಂಬುದೇ ಪ್ರಶ್ನೆಯಾಗಿದೆ.

ಚಿಕ್ಕಮಗಳೂರಿನ ನಾಲ್ಕೂ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಕೂಡ ಜೆಪಿ ಹೆಗ್ಡೆ ಬೆಂಬಲವಾಗಿ ಕೆಲಸ ಮಾಡುತ್ತಿದ್ದಾರೆ. ಹೆಗ್ಡೆ ಕಾಲಿಗೆ ಚಕ್ರ ಕಟ್ಟಿಕೊಂಡು ಶತಾಯಗತಾಯ ಗೆಲ್ಲಬೇಕು ಎಂದು ಓಡಾಡುತಿದ್ದಾರೆ. ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ ಗಳು, ಅಡಕೆ ಬೆಳೆಗಾರರು ಮಾಡಿರುವ ಸರ್ಕಾರಿ ಭೂಮಿ ಅಕ್ರಮಸಕ್ರಮದ ಆಸೆಯಿಂದ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆ ಇದೆ.

ಕೋಟ ಅವರಿಗೆ ಮೋದಿಯದ್ದೇ ರಕ್ಷಣೆ !
ಬಿಜೆಪಿ ಅಭ್ಯರ್ಥಿ ಕೋಟ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಅವರು 3 ಬಾರಿ ಮಂತ್ರಿಯಾಗಿದ್ದರೂ, ವಿಶೇಷವಾಗಿ ಉಡುಪಿ ಚಿಕ್ಕಮಳೂರಿನಲ್ಲಿ ಅವರು ಹೇಳಿಕೊಳ್ಳುವ ಕೆಲಸ, ಯೋಜನೆ, ಕಾಮಗಾರಿಗಳಿಲ್ಲ. ಹಾಲಿ ಸಂಸದೆ ಶೋಭಾ ಅವರನ್ನು ಕ್ಷೇತ್ರದ ಮತದಾರರೇ ಗೋ ಬ್ಯಾಕ್ ಎಂದಿರುವುದರಿಂದ ಅವರ ಹೆಸರಿನಲ್ಲಿ ಮತ ಕೇಳುವುದಕ್ಕೂ ಸಾಧ್ಯವಾಗುತ್ತಿಲ್ಲ. 

ಉಡುಪಿಯ ಬಿಜೆಪಿ ಸಾಸಕರು ತಂತಮ್ಮ ಕ್ಷೇತ್ರಗಳಲ್ಲಿ ಎಡೆಬಿಡದೇ ಕಾರ್ನರ್ ಮೀಟಿಂಗ್ ಗಳನ್ನು ಮಾಡಿ ಮೋದಿಗಾಗಿ ಮತ ಕೇಳುತ್ತಿದ್ದಾರೆ. ಕೇಂದ್ರ ರಾಜ್ಯದ ಸ್ಟಾರ್ ಕ್ಯಾಂಪೇನರ್ ಗಳು ಕೂಡ ಬಂದು ಮೋದಿ ಜಪ ಮಾಡಿ ಹೋಗಿದ್ದಾರೆ. ಆದರೇ ಮೋದಿ ಅವರ ಹೆಸರು ಎಷ್ಟು ಮ್ಯಾಜಿಕ್ ಮಾಡುತ್ತದೆ ಎಂಬುದು ಕಾದು ನೋಡಬೇಕು.

ಕಾಂಗ್ರೆಸ್ ಗೆ ಉಚಿತ ಗ್ಯಾರಂಟಿ ಮತಗಳು...
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ ಪಂಚ ಉಚಿತ ಗ್ಯಾರಂಟಿಗಳ ಭರವಸೆಗಳು ಅದರ ಮತಗಳಿಕೆ ಹೆಚ್ಚಳಕ್ಕೆ ದೊಡ್ಡ ಕಾರಣವಾಗಿತ್ತು, ಈಗ ಈ ಎಲ್ಲಾ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗಿ, ಜನರು ಅದರ ಲಾಭ ಪಡೆಯುತಿದ್ದಾರೆ. ಮುಖ್ಯವಾಗಿ ಬಸ್ ಫ್ರಿ, ತಿಂಗಳಿಗೆ 2 ಸಾವಿರ ರು. ಪಡೆದ ಮಹಿಳಾ ಮತದಾರರು ಸಿದ್ದರಾಮಯ್ಯನತ್ತ ಒಲಿದರೇ ಅಚ್ಚರಿ ಇಲ್ಲ. ಇದು ಕಾಂಗ್ರೆಸ್ ನ ಮತಗಳಿಕೆ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನುವ ಲೆಕ್ಕಚಾರ, ಉಡುಪಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಗೆಲುವಿನತ್ತ ನೋಡುವುದಕ್ಕೆ ಕಾರಣವಾಗುತ್ತಿದೆ.

ಬಿಜೆಪಿಗೆ ಜೆಡಿಎಸ್ ನ ಬೋನಸ್ ಮತಗಳು !
ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಗೆ ಮತಪ್ರಮಾಣ ನಗಣ್ಯವಾಗಿದ್ದರೂ, ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸಾಕಷ್ಟು ಮತಪಾಲನ್ನು ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ (ಶೇ 14), ಮೂಡಿಗೆರೆ (ಶೇ 19) ಮತ್ತು ತರಿಕೆರೆ (ಶೇ 23)ಯಲ್ಲಿ ಜೆಡಿಎಸ್ ಗಮನಾರ್ಹ ಮತ ಗಳಿಸಿತ್ತು. ಈ ಬಾರಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್ ಮತಗಳು ಬಿಜೆಪಿಗೆ ಬೋನಸ್ ಆಗಲಿದೆ ಎನ್ನುವುದು ಬಿಜೆಪಿಯ ದೈರ್ಯಕ್ಕೆ ಕಾರಣವಾಗಿದೆ. ಆದರೇ ಜೆಡಿಎಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿರುವ ಮುಸ್ಲೀಂ ಓಟುಗಳು ಬಿಜೆಪಿಗೆ ಕೈಕೊಡಲಿವೆ.

Post a Comment

0 Comments