Header Ads Widget

ಬಂಟ್ವಾಳ: ಸರಕಾರಿ ಬಸ್ ಮತ್ತು ಕಾರಿನ ನಡುವೆ ಢಿಕ್ಕಿ : ಚಾಲಕ ಗಂಭೀರ..!!


ಬಂಟ್ವಾಳ : ಮಾರ್ಚ್ 17: ಪ್ರೈಮ್ ಟಿವಿ ನ್ಯೂಸ್ : ಸರಕಾರಿ ಬಸ್ ಮತ್ತು ಕಾರಿನ ನಡುವೆ ಢಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಬಾಂಬಿಲ ಎಂಬಲ್ಲಿ ಸಂಭವಿಸಿದೆ.

ಕಾರು ಚಾಲಕ, ಕಾವಳಪಡೂರು ಗ್ರಾಮದ ಮಧ್ವಪಲ್ಕೆ ನಿವಾಸಿ ಸಿರಿಲ್ ಡಿಸೋಜ ಅವರು ಗಾಯಾಳುವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದ ಬಸ್, ವಗ್ಗ ಕಡೆಗೆ ಸಾಗುತ್ತಿದ್ದ ಕಾರ್‌ಗೆ ಬಾಂಬಿಲ ಸೇತುವೆ ಬಳಿಯ ತಿರುವಿನಲ್ಲಿ ಢಿಕ್ಕಿಯಾಗಿದೆ.

ಅಪಘಾತದ ತೀವ್ರತೆಯಲ್ಲಿ ಕಾರಿನ ಮುಂಭಾಗ ಬಸ್‌ನ ಅಡಿಯಲ್ಲಿ ಸಿಲುಕಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಳಿಕ ಬಸ್‌ ಅನ್ನು ಹಿಂತೆಗೆದು ಕಾರು ಚಾಲಕನನ್ನು ಹೊರ ತೆಗೆಯಲಾಗಿತ್ತು. ಸ್ಥಳೀಯರು ಖಾಸಗಿ ಆಂಬುಲೆನ್ಸ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಿರಿಲ್ ಅವರ ಕಾಲು ಮುರಿತಗೊಂಡಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭದಲ್ಲಿ ಬಸ್ ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಬಂಟ್ವಾಳ ಟ್ರಾಫಿಕ್ ಎಸ್ ಐ.ಸುತೇಶ್,  ಬಂಟ್ವಾಳ ಗ್ರಾಮಾಂತರ ಎಸ್‌ಐ ಹರೀಶ್ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಸ್ಥಳದಲ್ಲಿ ಪದೇಪದೇ ಅಪಘಾತಗಳಾಗುತ್ತಿದ್ದು, ಹೆದ್ದಾರಿ ಅಭಿವೃದ್ಧಿ ಸಮಯದಲ್ಲಿ ಅವೈಜ್ಞಾನಿಕ ತಿರುವು ನೀಡಿರುವುದು ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡುವುದಾಗಿ ಟ್ರಾಫಿಕ್ ಎಸ್‌ಐ ಸುತೇಶ್‌ ಅವರು ತಿಳಿಸಿದ್ದಾರೆ.

Post a Comment

0 Comments