Header Ads Widget

ಸುರತ್ಕಲ್ : ಬಜರಂಗದಳದ ಕಾರ್ಯಕರ್ತನೊಂದಿಗೆ ಮುಸ್ಲಿಂ ಯುವತಿ ವಿವಾಹ : ಪೊಲೀಸ್ ಠಾಣೆಗೆ ಹಾಜರಾದ ದಂಪತಿಗಳು...!!

ಸುರತ್ಕಲ್ : ಡಿ.9: ಬಜರಂಗದಳದ ಕಾರ್ಯಕರ್ತ ಮುಸ್ಲಿಂ ಯುವತಿಯನ್ನು ಮದುವೆಯಾಗಿರುವ ಚಿತ್ರವೊಂದು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಬಜರಂಗದಳದ ಕಾರ್ಯಕರ್ತನಾಗಿರುವ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಮತ್ತು ಆಯೇಷಾ (19) ಮದುವೆಯಾಗಿದ್ದಾರೆ. ಆಯೇಷಾ ತಮ್ಮ ಹೆಸರನ್ನು ಅಕ್ಷತಾ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಮ್ಮ ಫೇಸ್‌ಬುಕ್‌ನಲ್ಲಿ ಚಿತ್ರ ಸಮೇತ ಪೋಸ್ಟ್‌ ಮಾಡಿದ್ದರು.

ನವೆಂಬರ್ 30ರಂದು ಆಯೇಷಾ ತನ್ನ ತಾಯಿ ಎದುರಿನಲ್ಲೇ ಪ್ರಶಾಂತ್ ಜೊತೆ ಹೋಗಿದ್ದರು. ಅವರಿಬ್ಬರೂ ಮದುವೆಯಾಗಿ ಶುಕ್ರವಾರ ಪೊಲೀಸ್ ಠಾಣೆಗೆ ಬಂದಿದ್ದಾರೆ ಎಂದು ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಯುವತಿ ತಾಯಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ನವೆಂಬರ್ 30ರಂದು ಕೆಲಸ ಮುಗಿಸಿ ಬಂದಾಗ ಮಗಳು ಆಯೇಷಾ ನಮ್ಮ ಪಕ್ಕದ ಮನೆಯ ನಿವಾಸಿ ಪ್ರಶಾಂತ್ ಮನೆಯಲ್ಲಿದ್ದಳು. ಮಗಳನ್ನು ಕರೆದಾಗ ಆಕೆಯ ಜೊತೆ ಬಂದಿದ್ದ ಪ್ರಶಾಂತ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ನಿಮ್ಮ ಅನುಮತಿ ಪಡೆದು ನಿಮ್ಮ ಮಗಳನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದ. ಆಯೇಷಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮರುದಿನ ತನ್ನ ತಾಯಿ ತಂಗಿ ಜೊತೆ ನಿಮ್ಮ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದ. ಆದರೆ, ಮರುದಿನ ಬರುವುದಾಗಿ ಹೇಳಿದವರು ಇನ್ನೂ ಬಂದಿಲ್ಲ ಎಂದು ಯುವತಿಯ ತಾಯಿ ಡಿ.1ರಂದು ದೂರು ನೀಡಿದ್ದರು.

ಸುರತ್ಕಲ್‌ ಠಾಣೆಯ ಪೊಲೀಸರು ಯಾವುದೇ ಕಲಂ ಉಲ್ಲೇಖಿಸದೇ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಪ್ರಶಾಂತ್‌ ಮೇಲೆ ಸುರತ್ಕಲ್ ಠಾಣೆಯಲ್ಲಿ ಈ ಹಿಂದೆ ರೌಡಿ ‍ಪಟ್ಟಿ ತೆರೆಯಲಾಗಿತ್ತು. ಈತನ ಮೇಲೆ ಹೊಡೆದಾಟದ ಪ್ರಕರಣಗಳು ಇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Post a Comment

0 Comments