Header Ads Widget

ಕನ್ನಡ ವಿಭಾಗ ಮುಂಬಯಿ ವಿವಿ : ಜಯ ಸಿ. ಸುವರ್ಣ ಸಂಸ್ಮರಣೆ ಮತ್ತು "ಸುವರ್ಣಯುಗ'’ ಕೃತಿ ಬಿಡುಗಡೆ ಸಮಾರಂಭ..!!


ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿರುವ ಜಯ ಸಿ. ಸುವರ್ಣ ಸಂಸ್ಮರಣೆ, ಸಮಾರಂಭವು   ಕಲೀನಾ ಕ್ಯಾಂಪಸ್‍ನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಸೆಪ್ಟೆಂಬರ್ 30ರಂದು ಮಧ್ಯಾಹ್ನ 2:30ಕ್ಕೆ   ನಡೆಯಲಿದೆ. ಅಂದು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ 97ನೆಯ ಪ್ರಕಟಣೆಯಾಗಿ ಅನಿತಾ ಪಿ. ತಾಕೊಡೆಯವರು   ಜಯ ಸುವರ್ಣರ ಜೀವನ ಸಾಧನೆಯ ಕುರಿತು ರಚಿಸಿದ ‘ಸುವರ್ಣಯುಗ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ.

ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರ   ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದರಾದ ಗೋಪಾಲ   ಸಿ. ಶೆಟ್ಟಿಯವರು ಉದ್ಘಾಟಿಸಲಿದ್ದಾರೆ.

ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾದ  ಮಧು ಬಂಗಾರಪ್ಪನವರು  ಕೃತಿಯನ್ನು  ಲೋಕಾರ್ಪಣೆಗೊಳಿಸಲಿದ್ದಾರೆ.  ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ   ರಾಮರಾವ್ ಅವರು ಕೃತಿಯನ್ನು ಪರಿಚಯಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ. ವಿಶ್ವನಾಥ ಕಾರ್ನಾಡ್, ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ದ ಅಧ್ಯಕ್ಷರಾದ  ಡಾ. ತುಕಾರಾಂ ಪೂಜಾರಿ, ‘ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ ಮುಂಬಯಿ’ ಇದರ ಆಡಳಿತ ನಿರ್ದೇಶಕರಾದ ರವಿ  ಎಸ್. ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ.

ಗೌರವಾನ್ವಿತ ಅತಿಥಿಗಳಾಗಿ ‘ಜಾಗತಿಕ ಬಂಟರ ಸಂಘಗಳ  ಒಕ್ಕೂಟ’ದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ, ‘ಜಯ ಶ್ರೀಕೃಷ್ಣ      ಪರಿಸರಪ್ರೇಮಿ ಸಮಿತಿ’ಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ‘ವಿಶ್ವದೇವಾಡಿಗ ಮಹಾಮಂಡಲ’ದ     ಅಧ್ಯಕ್ಷರಾದ   ಧರ್ಮಪಾಲ ಯು. ದೇವಾಡಿಗ, ‘ರಾಷ್ಟ್ರೀಯ ಬಿಲ್ಲವ ಮಹಾಮಂಡಲ’ದ ಅಧ್ಯಕ್ಷರಾದ ಡಾ.ರಾಜಶೇಖರ   ಕೋಟ್ಯಾನ್ ಇವರು ಭಾಗವಹಿಸಲಿದ್ದಾರೆ.

ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಸೂರ್ಯಕಾಂತ್ ಜಯ ಸುವರ್ಣ ಹಾಗೂ ಭಾಸ್ಕರ್ ಸಾಲಿಯನ್   ಇವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಜಯಲೀಲಾ ಟ್ರಸ್ಟ್ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ   ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲಾಗುವುದು.

ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ  ಕನ್ನಡ ವಿಭಾಗದ    ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜಯ ಸಿ.ಸುವರ್ಣ: ಇವರು  1991ರಿಂದ ಸುಮಾರು ಇಪ್ಪತ್ತೊಂದು ವರ್ಷಗಳ ಕಾಲ ಬಿಲ್ಲವರ ಅಸೋಸಿಯೇಶನ್‍ನಲ್ಲಿ ಅಧ್ಯಕ್ಷ   ಪದವಿಯಲ್ಲಿದ್ದು ಮುಂಬಯಿ ಬಿಲ್ಲವ ಸಮುದಾಯಕ್ಕೆ ಉನ್ನತ ಸ್ಥಾನಮಾನವನ್ನು ಕಲ್ಪಿಸಿಕೊಟ್ಟವರು. ಭಾರತ್ ಬ್ಯಾಂಕ್‍ನ   ಮೂವತ್ತೆರಡು ವರ್ಷಗಳ ಕಾರ್ಯಾವಧಿಯಲ್ಲಿ  ಹದಿನೆಂಟು ವರ್ಷ ಕಾರ್ಯಾಧ್ಯಕ್ಷರಾಗಿ, ಉಳಿದ ವರ್ಷಗಳಲ್ಲಿ ನಿರ್ದೇಶಕರಾಗಿ   ಕಾರ್ಯನಿರ್ವಹಿಸಿ, ಶಾಖೆಗಳನ್ನು ಐದರಿಂದ ನೂರಾ ಎರಡಕ್ಕೇರಿಸಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಮೆರುಗನ್ನು   ತಂದುಕೊಟ್ಟವರು. 

ಮುಂಬಯಿಯಲ್ಲಿ ಸ್ಥಾಪನೆಯಾದ ಬಿಲ್ಲವರ ಎಸೋಸಿಯೇಶನ್‍ನ ಆಶ್ರಯದಲ್ಲಿರುವ ಇಪ್ಪತ್ತೆರಡು ಸ್ಥಳೀಯ ಕಚೇರಿಗಳು ಜಯ   ಸುವರ್ಣರ ಸಂಘಟನೆಯ ಶಕ್ತಿಗೆ ಸಾಕ್ಷಿಯಾಗಿವೆ. ‘ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ’ ಇದರ ಸ್ಥಾಪಕರಾಗಿ,   ಅಧ್ಯಕ್ಷರಾಗಿ ಇನ್ನೂರ ಎಪ್ಪತ್ತೆರಡಕ್ಕೂ ಸಂಘಸಂಸ್ಥೆಗಳನ್ನು ಒಟ್ಟುಗೂಡಿಸಿದ್ದು ಇವರ ಅರ್ಹ ನಾಯಕತ್ವದ ಸಾಮರ್ಥ್ಯವನ್ನು   ಪ್ರತಿನಿಧಿಸುತ್ತದೆ. 

ಜಯಸುವರ್ಣರ ಮುಂದಾಳುತನದಲ್ಲಿ ನಿರ್ಮಾಣಗೊಂಡ, ‘ಬಿಲ್ಲವ ಭವನ’ ಬಿಲ್ಲವ ಸಮುದಾಯಕ್ಕೆ ಮಾತ್ರವಲ್ಲದೆ ಸರ್ವ   ಜಾತಿ, ಜನಾಂಗಕ್ಕೂ ಸೇರಿದ ಹೆಮ್ಮೆಯ ಭವನವಾಗಿದೆ.  ಈ ಕಾರ್ಯಕ್ರಮವನ್ನು ಕನ್ನಡ ವಿಭಾಗ ಮುಂಬಯಿ   ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಎಸ್. ಶೆಟ್ಟಿ ಹಾಗೂ ಬಿಲ್ಲವರ ಎಸೋಸಿಯೇಶನ್ ಮುಂಬಯಿ   ಇದರ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಅವರು ಸಂಯೋಜಿಸಲಿದ್ದಾರೆ.  

Post a Comment

0 Comments