Header Ads Widget

Whats-App-Image-2024-05-08-at-4-44-56-PM-4

ತೀವ್ರಗೊಂಡ "ಶೋಭಾ ಹಠಾವೋ ಬಿಜೆಪಿ ಬಚಾವೋ’' ಅಭಿಯಾನ...!!

ಉಡುಪಿ: ಮುಂಬರುವ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಟಿಕೆಟ್ ಪೈಪೋಟಿ ಜೋರಾಗಿದೆ. ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಶಾಸಕ ಸಿಟಿ ರವಿ ಬಣಗಳ ನಡುವಣ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ, ಬಿಜೆಪಿ ಕಾರ್ಯಕರ್ತರ ಒಂದು ಬಣದ ‘ಶೋಭಾ ಹಠಾವೋ ಬಿಜೆಪಿ ಬಚಾವೋ’ ಅಭಿಯಾನ ತೀವ್ರಗೊಂಡಿದೆ.

ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹೈಕಮಾಂಡ್ ನಾಯಕರಿಗೆ ಪತ್ರ ಬರೆದು ಶೋಭಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಮುಂದುವರಿದ ಭಾಗವಾಗಿ ಇದೀಗ ‘ಹಠಾವೋ ಅಭಿಯಾನ’ ಆರಂಭಗೊಂಡಿದೆ. ಪತ್ರ ಅಭಿಯಾನ, ಗೋ ಬ್ಯಾಕ್ ಶೋಭಾ ಅಭಿಯಾನದ ಜೊತೆ ಬಿಜೆಪಿ ಬಚಾವೋ ಅಭಿಯಾನ ಆರಂಭವಾಗಿದೆ.

5 ವರ್ಷಗಳಲ್ಲಿ 100 ದಿನವೂ ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಕೇ? ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಡವೇ ಬೇಡ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಸಿಟಿ‌ ರವಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದಾರೆ. ಒಂದು ಕಡೆ ಶೋಭಾ ವಿರುದ್ಧ ಹಠಾವೋ ಅಭಿಯಾನ ನಡೆಯುತ್ತಿದ್ದು, ಮತ್ತೊಂದು ಕಡೆ ಸಿಟಿ ರವಿಗೆ ಟಿಕೆಟ್ ನೀಡುವಂತೆ ಪತ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ವಿದ್ಯಮಾನ ಬಿಜೆಪಿ ನಾಯಕರಿಗೆ ಮುಜುಗರ ತರಿಸಿದೆ.

ಬಿಜೆಪಿಗೆ ಕೆಲವೆಡೆ ಆಡಳಿತ ವಿರೋಧಿ ಅಲೆ ಬಿಜೆಪಿಗೆ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟುತ್ತಿದೆ.ಶೋಭಾ ಕರಂದ್ಲಾಜೆಯ ಬದಲು ಸಿಟಿ ರವಿ ಅಥವಾ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎಂದು ತಿಳಿಯಲಾಗಿದೆ.

ವಿಶೇಷವೆಂದರೆ, ಸ್ವಪಕ್ಷದ ಕಾರ್ಯಕರ್ತರಿಂದಲೇ ಹಾಲಿ ಸಂಸದರ ವಿರುದ್ಧ ವಿರೋಧ ಹೆಚ್ಚಾಗುತ್ತಿದೆ. ಪ್ರಧಾನಿ ಮೋದಿ ಪರ ಅಲೆ, ಒಲವು ಇದ್ದರೂ ಕ್ಷೇತ್ರದ ಸಂಸದರನ್ನು ಕಾರ್ಯಕರ್ತರು ಒಪ್ಪದ ಸ್ಥಿತಿ ಇದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಘರ್ಷ ಒಂದು ರೀತಿಯದ್ದಾದರೆ ನೆರೆಯ ದಕ್ಷಿಣ ಕನ್ನಡದಲ್ಲಿಯೂ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಅನೇಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Post a Comment

0 Comments