ಉಡುಪಿ: ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸ್ನೇಹಿತನನ್ನೆ ಕತ್ತು ಸೀಳಿ ಕೊಲೆಗೈದ ಭೀಕರ ಘಟನೆಯೊಂದು ಉಡುಪಿ ಹಳೆ ಕೆಎಸ್ ಆರ್ ಟಿಸಿ ಬಳಿಯ ಕೃಷ್ಣ ಕೃಪಾ ಬಿಲ್ಡಿಂಗ್ ನ ನೆಲ ಅಂತಸ್ತಿನ ಕೊಠಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಕೊರಂಗ್ರಪಾಡಿಯ ಪ್ರಶಾಂತ್ ಶೆಟ್ಟಿ 32 ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ್ ಎಂಬಾತ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಕಂಠಪೂರ್ತಿ ಕುಡಿದು ಇಬ್ಬರು ಜಗಳ ಮಾಡಿಕೊಂಡಿದ್ದು, ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿ ಈರಣ್ಣ ಹರಿತವಾದ ಚೂರಿಯಿಂದ ಪ್ರಶಾಂತ್ ನ ಕತ್ತು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಕತ್ತು ಸೀಳಿದ ಬಳಿಕ ಆರೋಪಿಯು ಖುದ್ದು ಪೊಲೀಸರಿಗೆ ಕರೆ ಮಾಡಿ, ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಡಾ. ಅರುಣ್ ಕೆ., ಎಎಸ್ಪಿ ಸಿದ್ದಲಿಂಗಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ್ದಾರೆ.
0 Comments