Header Ads Widget

ಪ್ರೇಯಸಿಯಿಂದ ಮೋಸ : ಕಾಲೇಜಿನ ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಇರಿದ ಪ್ರಿಯಕರ...!!

ಮೂಡುಬಿದಿರೆ:  ಶಿಕ್ಷಣ ಕಾಶಿ ಎಂದೇ ಕರೆಯಿಸಿಕೊಂಡಿರುವ ಮೂಡಬಿದ್ರೆಯ ಹೆಸರಾಂತ ಕಾಲೇಜಿನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಇರಿದ ವಿಚಿತ್ರ ಘಟನೆ ನಡೆದಿದೆ.

ಸೋಮವಾರ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಆರೋಪಿ ಪೊಲೀಸರ ಅತಿಥಿಯಾಗಿದ್ದು, ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ಮೂಲದ ಮಂಜುನಾಥ್ ನಿಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ನಡುವೆ ಪ್ರೇಮಾಂಕುರವಾಗಿತ್ತು.

ವಿದ್ಯಾರ್ಥಿನಿ ಕೂಡ ತುಮಕೂರು ಮೂಲದವಳಾಗಿದ್ದು ಪಿಯುಸಿವರೆಗೆ ಇವರಿಬ್ಬರು ಜೊತೆಯಾಗಿಯೇ ಆಳ್ವಾಸ್ ನಲ್ಲಿ ಕಲಿಯುತ್ತಿದ್ದರು. ಹುಡುಗ ಆ ನಂತರ ಕಾಲೇಜು ಬಿಟ್ಟಿದ್ದು, ಈಕೆ ವಿದ್ಯಾಬ್ಯಾಸ ಮುಂದುವರಿಸಿದ್ದಳು. ಇವರ ನಡುವಿನ ಪ್ರೇಮದ ವಿಚಾರ ಹುಡುಗಿ ಮನೆಯವರಿಗೆ ತಿಳಿದಿದ್ದು ಆಕೆಯ ಬಳಿಯಿದ್ದ ಮೊಬೈಲ್ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.

ತನ್ನ ಪ್ರೀತಿ ಪ್ರೇಮ ಅರ್ಧದಲ್ಲೇ ಮೊಟಕುಗೊಂಡ ಹಿನ್ನೆಲೆಯಲ್ಲಿ ಪ್ರಿಯಕರ ಮಂಜುನಾಥ್ ವಿದ್ಯಾರ್ಥಿನಿ ವಿರುದ್ಧ ಸೇಡಿನ ಮನೋಭಾವ ಬೆಳೆಸಿಕೊಂಡಿದ್ದ.

ತನ್ನ ಪ್ರೇಯಸಿಯ ಭೇಟಿಗಾಗಿ  ತುಮಕೂರಿನಿಂದ ನೇರ ಮೂಡಬಿದ್ರೆಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದ. 

ಈತನ ಭೇಟಿಗೆ ನಿರಾಕರಿಸಿದ ವಿದ್ಯಾರ್ಥಿನಿ ನಡೆಯಿಂದ ಕುಪಿತಗೊಂಡ ಮಂಜುನಾಥ್ ನೇರವಾಗಿ ತರಗತಿಗೆ ನುಗ್ಗಿ ಕತ್ತರಿಯಿಂದ ಇರಿದಿದ್ದಾನೆ. ಕೂಡಲೇ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು ಮೂಡಬಿದ್ರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಇರಿತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹದಿಹರೆಯದಲ್ಲಿ ನಡೆಯುವ ಹುಚ್ಚು ಪ್ರೀತಿ, ಪ್ರೇಮ ಯಾವ ಹಂತಕ್ಕೆ ತಲುಪುತ್ತಿದೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.

Post a Comment

0 Comments